ಈಜಿಪ್ಟಿನ ಪ್ರಾಚೀನ ಸಾಹಿತ್ಯ
ಪುರಾತನ ಕಟ್ಟಡ, ದೇವಾಲಯ, ವಿಗ್ರಹ, ಪಿರಮಿಡ್ ಮತ್ತು ಫಲಕಗಳ ಮೇಲೆ ಕೊರೆದಿರುವ ಶಾಸನ ರೂಪದಲ್ಲಿ ಅಥವಾ ಒಸ್ಟ್ರಾಕ ಮತ್ತು ಪಪೈರಸ್ ಮೇಲೆ ಬರೆಯಲಾಗಿರುವ ಹಸ್ತಪ್ರತಿಗಳ ರೂಪದಲ್ಲಿ ಹೈರಾಟಿಕ್ ಅಥವಾ ಡೆಮಾಟಿಕ್ ಲಿಪಿಗಳಲ್ಲಿ ಉಳಿದುಬಂದಿದೆ. ಕಟ್ಟಡಗಳಲ್ಲಿ ದೊರಕಿರುವ ಸಾಹಿತ್ಯಭಾಗ ಬಹುಮಟ್ಟಿಗೆ ಚಾರಿತ್ರಿಕ ವಿಷಯಗಳಿಗೆ ಸಂಬಂಧಪಟ್ಟಿದ್ದರೆ ಓಲೆಗಳ ಮೇಲೆ ಇರುವ ಬರವಣಿಗೆ ನಿಜವಾದ ಸಾಹಿತ್ಯವೆಂದು ಪರಿಗಣಿಸಲ್ಪಟ್ಟಿದೆ. ಈ ಬರವಣಿಗೆಗಳು ಬಹುಮಟ್ಟಿಗೆ ಅಪೂರ್ವವಾಗಿ ದೊರಕಿದ್ದರೂ ಪಠ್ಯವಿಷಯಗಳನ್ನಾಗಿ ಇವನ್ನು ಬಳಸಿದ ಅಂದಿನ ವಿದ್ಯಾರ್ಥಿಗಳು ಮಾಡಿರುವ ಪ್ರತಿಗಳು ಸಿಗುತ್ತವಾಗಿ ಬರವಣಿಗೆಗಳ ಪೂರ್ಣ ಪಾಠಗಳನ್ನು ಗುರುತಿಸಲು ಸ್ವಲ್ಪ ಸಹಾಯವಾದಂತಾಗಿದೆ. ಆದಾಗ್ಯೂ ಈಜಿಪ್ಟ್ ಸಾಹಿತ್ಯದ ಬಹುಭಾಗ ಕಳೆದುಹೋಗಿರಬಹುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ. ಈ ಸಾಹಿತ್ಯದ ಮುಖ್ಯ ಲಕ್ಷಣಗಳೆಂದರೆ ಅದರ ವೈವಿಧ್ಯ ಮತ್ತು ವೈಪುಲ್ಯ. ಆಗಾಗ್ಯೆ ಹೊಸ ಸಾಹಿತ್ಯ ವಿಭಾಗಗಳು ತಲೆದೋರಿ ತಮ್ಮ ವಿಷಯ ಮತ್ತು ಧ್ಯೇಯಗಳಿಂದ ಮತೀಯ ಭಾವನೆಗಳನ್ನು ಸಮರ್ಥಿಸಿರುವುದನ್ನಿಲ್ಲಿ ಕಾಣಬಹುದಾಗಿದೆ. ಇಲ್ಲಿ ಸಾಹಿತ್ಯ ಜಡವಾಗಿರದೆ ಕ್ರಿಯಾತ್ಮಕವಾಗಿದೆ ಮತ್ತು ತನ್ನ ಸುದೀರ್ಘ ಜೀವಿತಕಾಲದಲ್ಲಿ ಪ್ರಗತಿಪರ ಬದಲಾವಣೆಗಳನ್ನು ಪ್ರದರ್ಶಿಸಿದೆ.

	ಈಜಿಪ್ಟಿನ ಪ್ರಾಚೀನ ಸಾಹಿತ್ಯವನ್ನು ಪೌರಾಣಿಕ, ಐತಿಹಾಸಿಕ ಅಥವಾ ರಮ್ಯ (ರೊಮಾನ್ಸ್) ಸಾಹಿತ್ಯ, ಸಾಮಾಜಿಕ ಅಥವಾ ಧಾರ್ಮಿಕ ಕವಿತೆಗಳು, ನೀತಿಬೋಧಕ ಸಾಹಿತ್ಯ ಮತ್ತು ಆದರ್ಶಪತ್ರಲೇಖನ ಸಾಹಿತ್ಯಗಳೆಂದು ವಿಂಗಡಿಸಬಹುದು. ಪೌರಾಣಿಕ ಸಾಹಿತ್ಯ ಬಹುವಾಗಿ ಅಂತ್ಯಸಂಸ್ಕಾರಗಳಿಗೆ ಸಂಬಂಧಿಸಿದ ಬರವಣಿಗೆಗಳನ್ನೊಳಗೊಂಡಿದ್ದು ಅವುಗಳಲ್ಲಿ ಪ್ರಸಿದ್ಧವಾದ ಮೃತರ ಗ್ರಂಥದಲ್ಲಿನ ಪ್ರಾರ್ಥನೆ, ಸೂಕ್ತ ಮತ್ತು ಮಂತ್ರಗಳು, ವಿಶ್ವದ ಸೃಷ್ಟಿ, ದೇವತೆಗಳ ಸ್ವಭಾವ ಮತ್ತು ಕಾರ್ಯರಂಗ ಮುಂತಾದ ವಿಷಯಗಳನ್ನು ಚರ್ಚಿಸಲಾಗಿದೆ. ಈ ವಿಷಯದಲ್ಲಿ ಜನರ ನಂಬಿಕೆಗಳು ಹಲವಾರು ಬಗೆಯಾಗಿದ್ದು ಪರಸ್ಪರ ವಿರೋಧಾತ್ಮಕವಾಗಿದ್ದುವು. ವಿಶ್ವದ ಆದಿಕಾಲದಲ್ಲಿ ಪುರಾತನ ಜಲರಾಶಿಯಿಂದ ಹುಟ್ಟಿಬಂದ ಬೆಟ್ಟದಲ್ಲಿ ಸೂರ್ಯ ಉದಯವಾದಲ್ಲಿಂದ ಸೃಷ್ಟಿ ಪ್ರಾರಂಭವಾಯಿತೆಂದು ಹೇಳಲಾಗಿದೆ. ಈಜಿಪ್ಟ್ ಪ್ರಾಕೃತಿಕ ಸನ್ನಿವೇಶವೇ ಈ ನಂಬಿಕೆಗಳಿಗೆ ಆಧಾರ. ದೇವಸಂಬಂಧವಾದ ಐತಿಹ್ಯಗಳಲ್ಲಿ ಇಸಿಸ್ ಮತ್ತು ಓಸಿರಿಸ್ ಕಥೆ ಮುಖ್ಯವಾದುದು. ಭೂಮಿಯ ರಾಜನಾದ ಓಸಿರಿಸ್ ಶಾಂತಿ ವ್ಯವಸ್ಥೆಗಳನ್ನು ಭೂಮಿಯಲ್ಲಿ ಸ್ಥಾಪಿಸಿದ್ದ. ಆದರೆ ಅಸೂಯಾಪರನಾದ ಆತನ ಸೋದರ ಸೇಟ್ ಮೋಸದಿಂದ ಓಸಿರಿಸನನ್ನು ಶವಪೆಟ್ಟಿಗೆಯಲ್ಲಿ ಮುಚ್ಚಿ ನದಿಯಲ್ಲಿ ಮುಳುಗಿಸಿದುದು, ಓಸಿರಿಸನ ಪತ್ನಿ ಇಸಿಸಳು ಬಹಳ ಕಷ್ಟದಿಂದ ಶವವನ್ನು ಗಳಿಸಿ ದೇವತೆಗಳ ಸಹಾಯದಿಂದ ಪತಿಗೆ ಜೀವದಾನ ಮಾಡಿಸಿದುದು, ಆದರೂ ಆತ ಪಾತಾಳದಲ್ಲಿ ಮೃತರ ರಾಜನಾಗಿ ವಾಸಿಸಬೇಕಾಗಿ ಬಂದದ್ದು - ಇದು ಆ ಗ್ರಂಥದ ಸಾರಾಂಶ. ಪತಿಯ ಮರಣಾನಂತರ ಇಸಿಸಳಲ್ಲಿ ಹುಟ್ಟಿದ ಗೃಧ್ರದೇವತೆ ಹೋರಸ್ ತಂದೆಯ ಹಂತಕನನ್ನು ಹುಡುಕಿ ದೀರ್ಘ ಹೋರಾಟ ನಡೆಸಿ ಗೆದ್ದ ಅನಂತರ ಭೂಮಿಯ ರಾಜನಾಗಿ ದೇವತೆಗಳಿಂದ ನೇಮಿತನಾದುದಾಗಿ ಮತ್ತೊಂದು ಕೃತಿಯಲ್ಲಿ ತಿಳಿಸಲಾಗಿದೆ.

	ಭಾವಗೀತೆಗಳು ಮತೀಯ, ಸಾಮಾಜಿಕ ವಸ್ತುಗಳಿಂದ ಕೂಡಿದ್ದು ದೇವತೆಗಳ, ರಾಜರುಗಳ ಯಶೋಗೀತೆಗಳಾಗಿವೆ. ಪಾಷಂಡಿ ದೊರೆಯೆಂದು ಹೆಸರಾದ ಆಕ್ನಾಟನ್ (ನೋಡಿ- ಆಕ್ನಾಟನ್) ದೊರೆಯಿಂದ ರಚಿತವಾದ ಸರಳ ಸುಂದರ ಆಟನ್ (ಸೂರ್ಯ) ಸ್ತುತಿ ಉತ್ತಮ ಉದಾಹರಣೆ. ಇದೇ ರೀತಿಯ ಮತ್ತೊಂದು ಉತ್ತಮ ಕೃತಿಯೆಂದರೆ ಆಮನ್-ರಾ ದೇವತೆಯ ಸ್ತುತಿ. ರಾಜನನ್ನು ಹೊಗಳುವ ಪ್ರಶಸ್ತಿ ಕವನಗಳು ಬಹಳವಾಗಿದ್ದು ಮುಮ್ಮಡಿ ಥಟ್ಮೋಸನ ಪ್ರಶಸ್ತಿಗೀತವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಾಮಾಜಿಕ ವಿಷಯವಾದ ಕವನಗಳಲ್ಲಿ ಪ್ರೇಮಗೀತೆಗಳು ಗಮನಾರ್ಹವಾದುವು. ವಿರಹಪೀಡಿತಳಾದ ಯುವತಿಯೊಬ್ಬಳು ತನ್ನ ಪ್ರೇಮಿಯ ಬರವನ್ನು ಕಾದಿರುವಾಗಿನ ಮನಃಸ್ಥಿತಿಯನ್ನು ಒಂದು ಕವಿತೆ ಹೃದಯಂಗಮವಾಗಿ ತಿಳಿಸಿದೆ.-ಚಿತ್ತಚಾಂಚಲ್ಯ ಮತ್ತು ಮನಃಕ್ಲೇಶಗಳನ್ನು ಕಣ್ಣುಗಳು ಹೊರಪಡಿಸಿದ್ದೇ ಆದರೆ ಇತರರಿಗೆ ಆಕೆಯ ಗುಟ್ಟು ಹೊರಪಡುವುದೆಂದೂ ಆದುದರಿಂದ ಕಂಪಿಸದಿದ್ದು ತನ್ನ ಗುಟ್ಟನ್ನು ಕಾಯಬೇಕೆಂದೂ ಹೃದಯಕ್ಕೆ ಆದೇಶವಿತ್ತಿದ್ದಾಳೆ.

ಕಂಪಿಸದಿರು ಓ ಎನ್ನಹೃದಯ !
ಪ್ರಿಯಕರನು ನಿನ್ನೆಡೆಗೆ ಬಾರದಿರನು.
ಈಕೆ ಪ್ರೇಮಬಾಧಿತಳೆಂದು
ಜನಕೋಟಿ ನುಡಿಯುವರು.
ಪ್ರಿಯಕರನ ಸ್ಮರಿಸುತಲಿ ನಿಶ್ಚಲದಿನಿರು ನೀನು 
ಕಂಪಿಸದಿರೆನ್ನ ಹೃದಯ !

	ಮತ್ತೊಂದು ಪ್ರೇಮಗೀತೆ ಇಡೀ ವಾರಪರ್ಯಂತ ಪ್ರೇಯಸಿಯ ದರ್ಶನವಿಲ್ಲದೆ ತಪಿಸುತ್ತಿರುವಾಗಿನ ಭಾವನೆಗಳನ್ನು ಹೃದಯಂಗಮವಾಗಿ ವರ್ಣಿಸುತ್ತದೆ. ಇನ್ನೊಂದು ಕವಿತೆ ನಶ್ವರ ಪ್ರಪಂಚದಲ್ಲಿ ಸಾಧ್ಯವಾದಷ್ಟು ಭೋಗಪೂರ್ಣಜೀವನ ನಡೆಸುವಂತೆ ತಿಳಿಸುತ್ತದೆ.

	ಈ ಸಾಹಿತ್ಯದಲ್ಲಿ ಶೋಕರಸ ಪ್ರಧಾನವಾದ ಕಾವ್ಯಗಳಿಲ್ಲವೆಂದರೆ ತಪ್ಪಾಗಲಾರದು. ಕೆಲವು ಕವನಗಳನ್ನು ಈ ಗುಂಪಿಗೆ ಸೇರಿಸುವ ಪ್ರಯತ್ನ ನಡೆದಿದ್ದರೂ (ಉದಾ: ಶವಸಂಸ್ಕಾರ ಸಂದರ್ಭದಲ್ಲಿ, ಜೀವನದ ನಶ್ವರತೆಯನ್ನು ಸಾರುವ ಹಾರ್ಟ್ ವಾದ್ಯಗಾರನ ಗೀತೆ ಆಥವಾ ಆತ್ಮಹತ್ಯೆಯಲ್ಲಿ ತೊಡಗಲಿರುವ ಒಬ್ಬ ಮಾನವ ಮತ್ತು ಅವನ ಆತ್ಮದ ನಡುವಣ ಸಂವಾದ) ಇವು ದುಃಖಾಂತಗಳಾಗಿರದೆ ಕಡೆಗೆ ಆಶಾವಾದವನ್ನೇ ಪ್ರತಿಪಾದಿಸುತ್ತವೆ.

	ಜನಪ್ರಿಯ ಕಾಲ್ಪನಿಕ ಸಾಹಿತ್ಯದ ಮತ್ತೊಂದು ವಿಭಾಗದಲ್ಲಿ ಬರುವ ಕುಫು ಮತ್ತು ಮಂತ್ರವಾದಿಯ ಕಥೆ. ವಾಚಾಳಿ ರೈತ ಮತ್ತು ಸಿನುಹೆಯ ಇತಿಹಾಸಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಡೆಯಲ್ಲಿ ಪ್ರಸ್ತಾಪಿಸಿದ ಸಿನುಹೆಯ ಇತಿಹಾಸದಲ್ಲಿ ಸಿನುಹೆ ಎಂಬ ಶ್ರೀಮಂತ ರಾಜಾಗ್ರಹದಿಂದ ಪಾರಾಗಲು ಈಜಿಪ್ಟಿನಿಂದ ಓಡಿಹೋಗಿ ಪ್ಯಾಲಿಸ್ಟೈನಿನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದು, ತನ್ನ ವೃದ್ಧಾಪ್ಯದಲ್ಲಿ ತಾಯ್ನಾಡಿನ ಕರೆಯನ್ನು ತಡೆಯಲಾರದೆ ದೊರೆಯಲ್ಲಿ ಕ್ಷಮೆ ಬೇಡಿ ತನ್ನ ಪ್ರಾರ್ಥನೆ ಈಡೇರಿದ ಅನಂತರ ಹಿಂತಿರುಗಿ ರಾಜಾನುಗ್ರಹಕ್ಕೆ ಪಾತ್ರನಾದುದೇ ಕಥಾವಸ್ತು. ತಾಯ್ನಾಡಿನಲ್ಲಿ ಶಾಂತಿಯಿಂದ ಬಾಳಿ ಅನಂತರದ ವಾಸಕ್ಕೆ ಒಳ್ಳೆಯ ಸಮಾಧಿಯನ್ನು ನಿರ್ಮಿಸಿಕೊಳ್ಳುವುದೇ ಜೀವನದ ಉನ್ನತ ಆಕಾಂಕ್ಷೆಯೆಂದು ತಿಳಿದ ಈಜಿಪ್ಟಿನ ಜನಕ್ಕೆ ಆ ಧ್ಯೇಯವನ್ನೇ ಪ್ರತಿಪಾದಿಸುವ ಈ ಕೃತಿ ಬಹು ಪ್ರಿಯವಾಯಿತು.

	ಬೋಧನಾತ್ಮಕ ಸಾಹಿತ್ಯ ಹಲವು ಉತ್ತಮ ಕೃತಿಗಳನ್ನು ನೀಡಿದೆ. ಸಾಮಾನ್ಯವಾಗಿ ವೃದ್ಧನೊಬ್ಬ ತರುಣನಿಗೆ ಸಾಮಾಜಿಕ ಹಾಗೂ ವ್ಯಾವಹಾರಿಕ ನಡೆವಳಿಕೆಗಳನ್ನು ಅಥವಾ ದೊರೆ ತನ್ನ ಉತ್ತರಾಧಿಕಾರಿಗೆ ರಾಜ್ಯಾಡಳಿತ ವಿಷಯವಾದ ಶಿಕ್ಷಣವನ್ನು ಬೋಧಿಸುವುದು ವಸ್ತುವಾಗಿರುವ ಈ ಸಾಹಿತ್ಯ ವಿಭಾಗದಲ್ಲಿ ಪ್ತಾ ಹೋಟೆಪನ e್ಞÁನಸೂತ್ರಗಳು ಬಹಳ ಪ್ರಸಿದ್ಧವಾಗಿದ್ದು ಎಲ್ಲ ತರುಣ ವಿದ್ಯಾರ್ಥಿಗಳೂ ಅದನ್ನು ಕಲಿಯಬೇಕಾಗಿತ್ತು. ಇದೇ ರೀತಿಯ ಮತ್ತೊಂದು ಕೃತಿ ಅಮೆನ್ ಮೊಪೆಟ್‍ನ ಬುದ್ಧಿವಾದಗಳು ಎಂಬ ಗ್ರಂಥ. ಇದು ಬೈಬಲಿನ ಗಾದೆಗಳ ಪುಸ್ತಕ ಎಂಬ ಭಾಗಕ್ಕೆ ಮಾದರಿಯಾಯಿತೆಂದು ಹೇಳಲಾಗಿದೆ. ಗ್ರೀಕ್ ಕಥೆಗಾರ ಈಸೋಪನ ನೀತಿ ಕಥೆಗಳಿಗೆ ಆಧಾರವಾಗಿದ್ದಿರಬಹುದಾದ ನೀತಿಕಥಾಸಾಹಿತ್ಯ ಕೆಲಮಟ್ಟಿಗೆ ಬಳಕೆಯಲ್ಲಿತ್ತು. 
(ನೋಡಿ- ಈಸೋಫ್)

	ವಿಶ್ವದ ಪ್ರಾಚೀನ ಸಾಹಿತ್ಯಗಳಲ್ಲಿ ಮತ್ತೆಲ್ಲೂ ಕಂಡುಬರದ ಪತ್ರಲೇಖನ ವಿಭಾಗ ಈಜಿಪ್ಟಿನ ಸಾಹಿತ್ಯದ ಒಂದು ಹೊಸ ಕೊಡುಗೆಯೆಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ಮೃತರೊಂದಿಗೆ ಜೀವಿಸಿರುವವರು ಪತ್ರಮುಖೇನ ಸಂಪರ್ಕ ಬೆಳೆಸುವುದೇ ಈ ಸಾಹಿತ್ಯ ವಿಭಾಗದ ಮುಖ್ಯವಸ್ತು. ಈ ವಿಭಾಗದಲ್ಲಿ ಗಮನಾರ್ಹವಾದುದು ಉನ್ನತ ಅಧಿಕಾರಿಯೊಬ್ಬ ಗತಿಸಿದ ತನ್ನ ಪತ್ನಿಗೆ ಬರೆದಿರುವ ಒಂದು ಪತ್ರ. ಆಕೆಯ ಜೀವಿತ ಕಾಲದಲ್ಲಿ ಆಕೆಯನ್ನು ಉತ್ತಮವಾಗಿ ನೋಡಿಕೊಂಡು, ಆಕೆಯ ಮಾತನ್ನುಲ್ಲಂಘಿಸದೆ ಆದರ್ಶಪತಿಯಾಗಿ ನಡೆದುಕೊಂಡಿದ್ದರೂ ಮರಣಾನಂತರ ಆಕೆ ಬಹುರೀತಿಯ ಆತಂಕಗಳನ್ನೊಡ್ಡುತ್ತಿರುವುದರಿಂದ ತನಗಾಗಿರುವ ಕಷ್ಟಗಳನ್ನು ಹೇಳಿಕೊಂಡು ಅಂಥ ನಡತೆಗಾಗಿ ಆಕೆಯನ್ನು ದೂಷಿಸಿರುವುದೇ ಈ ಪತ್ರದ ಸಾರಾಂಶ.

	ಇದಲ್ಲದೆ, ನ್ಯಾಯಶಾಸ್ತ್ರ, ವ್ಯಾವಹಾರಿಕ, ಐತಿಹಾಸಿಕ ಮತ್ತು ಶಾಲಾ ಕೆಲಸಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳು ದೊರಕಿದ್ದರೂ ಅವನ್ನು ಸಾಹಿತ್ಯಿಕ ಬರವಣಿಗೆಗಳೆಂದು ಪರಿಗಣಿಸಲಾಗುವುದಿಲ್ಲ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ